👆ನಮ್ಮ ಹೊಲದ ಮಣ್ಣು ಗಟ್ಟಿಯಾದಲ್ಲಿ (compacted) ಏನೇನು ಅವಘಢಗಳು ನಡೆಯುತ್ತವೆ ನೋಡಿ.
ಕೆಲವು ಗಿಡದ ಬೇರುಗಳು ಮಣ್ಣೊಳಗೆ ಇಳಿಯುತ್ತಾ ಕ್ರಮೇಣ ಅಡ್ಡಡ್ಡ ಹರಡಿಕೊಳ್ಳುತ್ತವೆ. ಮಣ್ಣು ಗಟ್ಟಿಯಾದಾಗ (compaction) ಈ ರೀತಿ ಆಗುತ್ತದೆ. ಹೀಗೆ ಅಡ್ಡಡ್ಡ ಹರಡುವ ಬೇರುಗಳಿರುವ ಗಿಡಕ್ಕೆ ಪೋಷಕಾಂಶ ಹಾಗೂ ತೇವಾಂಶ ಸಿಗುವುದು ಸ್ವಲ್ಪ ಕಷ್ಟವೇ. ಇವೆರಡೂ ಸಕಾಲದಲ್ಲಿ ಸಿಗದಿದ್ದಲ್ಲಿ ಗಿಡಗಳು ಬಳಲುತ್ತವೆ – ದುರ್ಬಲಗೊಳ್ಳುತ್ತವೆ. ಶಕ್ತಿ ಕಳೆದುಕೊಳ್ಳುತ್ತವೆ.
ದುರ್ಬಲಗೊಂಡಿರುವ ಗಿಡಗಳು ಕಡೆಯ ಪ್ರಯತ್ನವಾಗಿ ತನ್ನ ಉಳಿವಿಗಾಗಿ ಅಗತ್ಯವಾದ ತೇವ ಮತ್ತು ಪೋಷಕಾಂಶಕ್ಕಾಗಿ ಅಕ್ಕಪಕ್ಕದ ಗಿಡಗಳೊಂದಿಗೆ ಸ್ಪರ್ಧಿಸುತ್ತವೆ. ಬಲಿಷ್ಠ ಗಿಡ ಬದುಕುತ್ತದೆ. ದುರ್ಬಲ ಗಿಡ ಒಣಗುತ್ತದೆ.
ಇಂತಹ ಒಣಗಿದ ಶಕ್ತಿಹೀನ ಗಿಡಗಳನ್ನು ಬೆಳೆ ಪೀಡೆಗಳು ಸುಲಭವಾಗಿ ಆಕ್ರಮಿಸುತ್ತವೆ. ಪೀಡೆಗಳೊಂದಿಗೆ ಹೋರಾಡುವ ಕಸುವಿಲ್ಲದ ಗಿಡಗಳು ಪೀಡೆಗಳಿಗೆ ಬಲಿಯಾಗುತ್ತವೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗಟ್ಟಿಯಾಗಿರುವ ಮಣ್ಣಲ್ಲಿ ಕೆಲವು ಬಗೆಯ ಕಳೆಗಿಡಗಳು ಬೆಳೆಯುತ್ತವೆ. ಅವುಗಳ ಬೇರುಗಳನ್ನು ಗಮನಿಸಿದಾಗ, ಆ ಕಳೆ ಗಿಡದ ಬೇರುಗಳು ಗಟ್ಟಿ ಪದರವಿರುವ ಮಣ್ಣನ್ನು ಭೇದಿಸಿ ಆಳವಾಗಿಳಿಯುತ್ತವೆ. ಬೇರುಗಳ ಮೂಲಕ ತಾನಿಳಿದ ಮಾರ್ಗದುದ್ದಕ್ಕೂ ಗಾಳಿಯನ್ನೂ ಸಹ ಕೊಂಡೊಯ್ಯುತ್ತದೆ.
ಮಳೆಯಾದಲ್ಲಿ, ಮಳೆನೀರೂ ಕೂಡಾ ಬೇರಿನಾಳಕ್ಕೆ ಹರಿದು ಮಣ್ಣನ್ನು ತಂಪಾಗಿಸುತ್ತದೆ. ತಂಪಿರುವ ಮಣ್ಣಲ್ಲಿ ಜೀವಿಗಣಗಳು ಖುಷಿಯಾಗಿ ಮಣ್ಣಿನಾದ್ಯಂತ ಓಡಾಡಿಕೊಂಡಿರುತ್ತವೆ. ಹಾಗೆಯೇ ಮಣ್ಣಲ್ಲಿನ ಖನಿಜಾಂಶವನ್ನು ಮೇಲ್ಭಾಗಕ್ಕೆ ರವಾನಿಸುತ್ತವೆ.